ಬಾಮ್‍ಗಾರ್ಟನ್, ಅಲೆಕ್ಸಾಂಡರ್ ಗಾಟ್‍ಲಿಬ್
1714-62. ಜರ್ಮನಿಯ ತತ್ತ್ವಶಾಸ್ತ್ರಜ್ಞ. ಆಧುನಿಕ ಸೌಂದರ್ಯ ಮೀಮಾಂಸೆಯ ಜನಕನೆಂದೂ ಕರೆಯಲಾಗಿದೆ. ಸೌಂದರ್ಯ ಮೀಮಾಂಸೆಗೆ ಈಸ್ತೆಟೆಕ್ ಎಂಬ ಪಾರಿಭಾಷಿಕ ಪದ ಈತನ ಕೊಡುಗೆಯೇ. ಈತನ ಶ್ರಮದಿಂದಲೇ ಸೌಂದರ್ಯ ಮೀಮಾಂಸೆ ಸಾಮಾನ್ಯ ತತ್ತ್ವಶಾಸ್ತ್ರದಿಂದ ಪ್ರತ್ಯೇಕಿಸಲ್ಪಟ್ಟು ಒಂದು ಸ್ವತಂತ್ರವಾದ ಜಿಜ್ಞಾಸೆ ಎಂಬ ನಿಲುವನ್ನು ತಾಳಿದುದು.

ಈತನ ಪ್ರಕಾರ ಸೌಂದರ್ಯಾನುಭವವೂ ಒಂದು ರೀತಿಯ ಅರಿವು ಅಥವಾ ಜ್ಞಾನ. ಈ ಜ್ಞಾನ ಇಂದ್ರಿಯಜನ್ಯ. ಅಖಂಡ ಮತ್ತು ಅಬಾಧಿತವಾದ ಪರತತ್ತ್ವ ಸತ್ಯವೆಂಬ ರೂಪದಲ್ಲಿ ತರ್ಕ ಅಥವಾ ನ್ಯಾಯದ ವಸ್ತುವಾಗುವಂತೆ, ಧರ್ಮವೆಂಬ ರೂಪದಲ್ಲಿ ನೈತಿಕ ಅನುಷ್ಠಾನದ ವಸ್ತುವಾಗುವಂತೆ, ಸೌಂದರ್ಯವೆಂಬ ರೂಪದಲ್ಲಿ ಇಂದ್ರಿಯಗ್ರಾಹ್ಯವಾಗಬಲ್ಲ ವಸ್ತು. ಎಂದರೆ ಬುದ್ಧಿಯ ಮೂಲಕ ನಮಗೆ ವೇದ್ಯವಾಗಬಹುದಾದ ಸತ್ಯವೆಂಬ ಪರತತ್ತ್ವ; ಭಾವನೆಯ ಮೂಲಕ ನಮಗೆ ಅಭಿವ್ಯಕ್ತವಾಗಬಹುದಾದರೆ ಅದೇ ಸೌಂದರ್ಯವೆಂದೆನಿಸುತ್ತದೆ. ಪ್ರಕೃತಿ ಸುಂದರಪರತತ್ತ್ವದ ಒಂದು ಅಂಶ; ಅವಿಷ್ಕøತ ರೂಪ. ಆದ್ದರಿಂದ ಕಲೆಯ ಆದರ್ಶ ಪ್ರಕೃತಿ. ಅದನ್ನು ಅನುಕರಿಸುವುದೇ ಕವಿಯ ಧ್ಯೇಯ.
ಈ ವಿಚಾರ ಲೈಪ್‍ನಿಟ್ಸನ ವಿಚಾರ ಧಾರೆಯಿಂದ ಪ್ರಭಾವಗೊಂಡಿದೆಯೆಂದೂ ಕಾಂಟನ ವಿಚಾರಕ್ಕೆ ತಳಹದಿಯೆಂದೂ ವಿದ್ವಾಂಸರ ಅಭಿಪ್ರಾಯ.
ಮೆಟಾಫಿಸಿಕಾ (1739) ಮತ್ತು ಈಸ್ತೆಟಿಕಾ ಅಕ್ರೊಮ್ಯಾಟಿಕಾ (1750-58 ಅಪೂರ್ಣ) ಈತನ ಕೃತಿಗಳು.
(ಕೆ.ಬಿ.ಆರ್.)